ಡೇಲಿ ಎಕ್ಸ್‍ಪ್ರೆಸ್
 	1900ರಲ್ಲಿ ಲಂಡನಿನಿಂದ ಪ್ರಕಟವಾಗಲಾರಂಭಿಸಿದ ಒಂದು ದಿನ ಪತ್ರಿಕೆ. ಆಗ ಡೇಲಿ ಮೇಲ್ ಪತ್ರಿಕೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಅದರೊಂದಿಗೆ ಸ್ಪರ್ಧಿಸಬಲ್ಲ ಪತ್ರಿಕೆಗಳೇ ಇರಲಿಲ್ಲ. ಆಗ ಅರ್ಧ ಪೆನಿಯ ಬೆಳಗಿನ ಪತ್ರಿಕೆಯಾಗಿ ಸಿ. ಆರ್ತರ್ ಪಿಯರ್ಸನನಿಂದ (1866-1921) ಡೇಲಿ ಎಕ್ಸ್‍ಪ್ರೆಸ್ ಆರಂಭವಾಯಿತು. 1930ರ ವೇಳೆಗೆ ಇದರ ಪ್ರಸಾರ ಡೇಲಿ ಮೇಲಿನದನ್ನೂ ಮೀರಿಸಿತು. ಉಚಿತ ಬಹುಮಾನಗಳನ್ನು ನೀಡುತ್ತಿದ್ದುದು ಇದಕ್ಕೆ ಒಂದು ಕಾರಣ. ಮೊದಲ ಪುಟದಲ್ಲಿ ಪ್ರಮುಖ ಸುದ್ದಿಗಳನ್ನು ಪ್ರಕಟಿಸುವ ಅಮೆರಿಕನ್ ವಿಧಾನವನ್ನು ಮೊದಲ ಸಂಚಿಕೆಯಿಂದಲೇ ಡೇಲಿ ಎಕ್ಸ್‍ಪ್ರೆಸ್ ಅನುಸರಿಸಿತು. ಅಲ್ಲಿಯವರೆಗೆ ಬ್ರಿಟನಿನ ಎಲ್ಲ ಬೆಳಗಿನ ಪತ್ರಿಕೆಗಳು ಮೊದಲ ಪುಟವನ್ನು ದುಬಾರಿ ಜಾಹೀರಾತುಗಳಿಗೆ ಮೀಸಲಾಗಿ ಇಟ್ಟಿರುತ್ತಿದ್ದುವು. ಈ ಸಂಪ್ರದಾಯ ಮುರಿದ ಪ್ರಥಮ ಲಂಡನ್ ಪತ್ರಿಕೆ ಡೇಲಿ ಎಕ್ಸ್‍ಪ್ರೆಸ್. 

	1904ರಲ್ಲಿ ಆರ್. ಡಿ. ಬ್ಲೂಮೆನ್‍ಫೆಲ್ಡ್ ಸಂಪಾದಕರಾದರು. ಇವರು ಮೊದಲು ಡೇಲಿ ಮೇಲ್ ಪತ್ರಿಕೆಯ ಸುದ್ದಿ ಸಂಪಾದಕರಾಗಿದ್ದರು. 1912ರಲ್ಲಿ ಇವರು ರಚಿಸಿದ ಸಿಂಡಿಕೇಟ್ ಇದರ ಹತೋಟಿ ಪಡೆಯಿತು. ಆರ್ಥಿಕವಾಗಿ ಪತ್ರಿಕೆ ಅಷ್ಟೇನೂ ಅಭ್ಯುದಯಸ್ಥಿತಿಯಲ್ಲಿಲ್ಲದಿದ್ದಾಗ ಲಾರ್ಡ್ ಬೀವರ್‍ಬ್ರೂಕ್ ಇದರಲ್ಲಿ ವಿಶೇಷ ಆಸಕ್ತಿ ವಹಿಸಲಾರಂಭಿಸಿದರು. 1922ರಲ್ಲಿ ಅವರು ಇದರ ಸಂಪೂರ್ಣ ಹತೋಟಿ ಪಡೆದುಕೊಂಡರು. ಪತ್ರಿಕೆಯ ಅಭಿವೃದ್ಧಿಗಾಗಿ ಅಗಾಧ ಹಣ ವೆಚ್ಚಮಾಡಿದರು. ಮೂರು ಸ್ಥಳಗಳಿಂದ (ಲಂಡನ್, ಮ್ಯಾಂಚೆಸ್ಟರ್, ಗ್ಲಾಸ್ಗೋ) ಏಕಕಾಲದಲ್ಲಿ ಪ್ರಕಟವಾಗಲಾರಂಭಿಸಿದ ಪ್ರಥಮ ಬ್ರಿಟಿಷ್ ಪತ್ರಿಕೆ ಇದು. 1933ರಲ್ಲಿ ಆರ್ತರ್ ಕ್ರಿಶ್ಚನ್ ಸೇನ್ ಇದರ ಸಂಪಾದಕರಾದರು. ಇವರು ಹೊಸ ಪುಟವಿನ್ಯಾಸ ವಿಧಾನವನ್ನು ಅಳವಡಿಸಿದರು. ಪರಿಣಾಮವಾಗಿ ಪ್ರಸಾರ ದ್ವಿಗುಣವಾಯಿತು. 1960ರಲ್ಲಿ ಇದರ ಪ್ರಸಾರ 42,00,000 ಆಗಿತ್ತು. ಜೆ.ಬಿ. ಮಾರ್ಟಿನ್ ಈ ಪತ್ರಿಕೆಗೆ ಹಾಸ್ಯಲೇಖನಗಳನ್ನು ಬರೆಯುತ್ತಿದ್ದರು. 

	ಇಂದು ಈ ಪತ್ರಿಕೆಯ ಸುದ್ದಿಸೇವೆ ಅಗಾಧ. ಇದಕ್ಕಾಗಿ ನೂರಾರು ಪತ್ರಿಕೆಗಳು ಡೇಲಿ ಎಕ್ಸ್‍ಪ್ರೆಸ್‍ಗೆ ಚಂದಾ ಸಲ್ಲಿಸುತ್ತಿವೆ. ವಿದೇಶಗಳಲ್ಲಿ ಇದಕ್ಕೆ ಅನೇಕ ಮಂದಿ ಬಾತ್ಮೀದಾರರಿದ್ದಾರೆ. ಪತ್ರಿಕೆಯ ಒಡೆತನ ಎಕ್ಸ್‍ಪ್ರೆಸ್ ನ್ಯೂಸ್‍ಪೇಪರ್ ಲಿಮಿಟೆಡ್ ಸಂಸ್ಥೆಯದು. ಇದರ ಸಹ ಭಾನುವಾರ ಪತ್ರಿಕೆ ಸಂಡೆ ಎಕ್ಸ್‍ಪ್ರೆಸ್ ಮತ್ತು ಡೇಲಿ ಸ್ಟಾರ್. 
(ಕೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ